Monday, November 29, 2010

ಪ್ರೇಮ ಗೀತೆ

ಉಕ್ಕಿ ಬರುತಿಹ ಬಾವನೆಗಳಿಗೆ
ಮುತ್ತಿನ ಅಕ್ಷರ ಜೋಡಿಸಿ
ಮೆತ್ತನೆಯ ಹೂಗಳ ಹಾಳೆಯ ಮೇಲೆ
ಬರೆದಿಟ್ತಿದ್ದೆ ನಿನಗಾಗಿ ಒಂದು ಕವಿತೆ.

ತಂಗಾಳಿಗೆ ಹೂಗಳು ತಲೆದೂಗುತ ಮೈಮರೆಯುವ ರಾಗದಿ,
ಕಂಪಿಸುವ ಹೃದಯಾಳದ ತಾಳಕ್ಕೆ ಮೇಳೈಸಿ,
ಹೊಸ ಉತ್ಸಾಹದಿ ನಿನ್ನೆದುರು ಅರುಹುವ ಮೊದಲೇ,
ಸದ್ದಿಲ್ಲದೆ ಎರಡು ಹೃದಯಗಳ ಮಿಲನವಾಗಿತ್ತು
ಸುಶ್ರಾವ್ಯ ಪ್ರೇಮಗೀತೆ ಕೇಳಿಬರುತಿತ್ತು.


ಅಶ್ವತ್ ಭಾಗವತ್
ಹಿರಿಯಡಕ





Wednesday, May 12, 2010

ನನ್ನುಸಿರು ನೀನು....

ಹೃದಯ ಭಾರವಾದಾಗ ತಿಳಿಯಿತು,
ಇದರಲ್ಲಿ ಪ್ರೀತಿ ತುಂಬಿದೆ ಎಂದು,
ನೀನು ದೂರವಾದಾಗ ತಿಳಿಯಿತು,
ನನ್ನುಸಿರು ನೀನಾಗಿದ್ದೆ ಎಂದು.

ತುಸು ಜೋರಾಗೇ ಬಡಿಯುತ್ತಿದೆ ಹೃದಯವಿಂದು,
ನಿನ್ನ ಹೆಸರನು ಜೋರಾಗಿ ಕೂಗಿ ಕರೆಯಲೆಂದು.
ತುಸು ಜಾಸ್ತಿನೇ ಸೊರಗಿದೆ ಕಣ್ಣು ನಿನಗಾಗಿ ಕಾದು,
ಆದರೂ ಎಲ್ಲೆಡೆ ಹುಡುಕುತ್ತಿದೆ ಮತ್ತೆ ನಿನ್ನ ನೋಡಲೆಂದು.

ದಣಿದಂತಿದೆ ಜೀವ, ಪ್ರತಿ ಉಸಿರಲ್ಲೂ ಬರೀ ನೋವು,
ಬರಡಾಗಿದೆ ಬದುಕು, ಪ್ರತಿ ಕ್ಷಣದಲ್ಲೂ ಬರೀ ದಿಗಿಲು.
ಕೇಳದಿಹುದೇ ಆಕ್ರಂಧನ ನೀನೆಲ್ಲಿ ಮರೆಯಾದರೂ,
ಮತ್ತೆ ಬೇಕೆನಿಸದೇ ಹೃದಯ ನೀನೇಕೆ ದೂರಾದರೂ.


ಅಶ್ವತ್ ಭಾಗವತ್
ಹಿರಿಯಡಕ

Tuesday, April 27, 2010

ಚದುರಂಗದಾಟ....

ಮಾನವ ಜೀವನವಿದು ಚದುರಂಗದಾಟ,
ನಾವು ನೀವೆಲ್ಲ ಬರಿಯ ನಿಮಿತ್ತ ಮಾತ್ರ.

ನಿನ್ನೆ ನಕ್ಕವರು ಇಂದು ಅಳುತ ಕೂತಿಹರು,
ಇಂದು ಅತ್ತವರು ನಾಳೆ ನಗುತ ನಲಿಯುವರು.
ಅಳು ನಗುವೆರರಲ್ಲೂ ಬೇಸತ್ತು ಹೊರಳಾಡುತಿಹರು,
ವಾಸ್ತವ ತಿಳಿಯದ ನಾವೆಲ್ಲರೂ ಒಂಥರ ಹುಚ್ಚರು.

ಗೆಲುವು ನನದೆಂದು ಬೀಗಲು ನಾನ್ಯಾರು,
ಸೋಲು ನಿನದೆಂದು ಕೊರಗಲು ನೀನ್ಯಾರು,
ಗೆದ್ದವರು ಸೋತಿಹರು, ಸೋತವರು ಗೆದ್ದಿಹರು,
ತಿಳಿಯದು ಆಟದಲಿ ಸೋಲ್ಯಾವುದು, ಗೆಲುವ್ಯಾವುದು.

ಸೋತು ಸೊರಗಿರುವ ಹೃದಯದಲಿ ಸಹನೆಯಿರಲಿ,
ಗೆದ್ದು ಮೆರೆಯುತಿಹ ಮನಸ್ಸಿದು ಮೈಮರೆಯದಿರಲಿ.
ಗೆಲುವಿನ ಬಯಕೆಯ ಜೊತೆ ಪರಿಶುದ್ದ ಪ್ರಯತ್ನವಿರಲಿ,
ಸೋಲಾದರೇನು, ಗೆಲುವಾದರೇನು, ಇರುವುದರಲಿ ತೃಪ್ತಿಯಿರಲಿ.

ಚದುರಂಗದಾಟದಲಿ ಅವನದೇ ಹಿಡಿತ,
ನಮ್ಮೆಲ್ಲರ ನಡೆಗಳನ್ನರಿತ ಅವನೊಬ್ಬನೇ ಪರಿಣಿತ.
ಮಾನವ ಜೀವನವಿದು ಚದುರಂಗದಾಟ
ನಾವು ನೀವೆಲ್ಲ ಬರಿಯ ನಿಮಿತ್ತ ಮಾತ್ರ......


ಅಶ್ವತ್ ಭಾಗವತ್
ಹಿರಿಯಡಕ

Tuesday, March 30, 2010

ನಾನೇಕೆ ಮೌನಿಯಾದೆ

ನಿನ್ನ ಕಂಡ ಮೊದಲ ದಿನವೇ
ನಾ ಹೇಳಬಹುದಿತ್ತು,
ನೀ ನನ್ನ ಕನಸಲ್ಲಿ ಬಂದ ಚೆಲುವೆಯೆಂದು.
ಆದರೇನು ಮಾಡಲಿ, ನಿನ್ನ ಕಣ್ಣೋಟದ ಬಾಣಗಳು
ನನ್ನೀ ಹೃದಯವ ನಾಟಿಕೊಂಡಿತ್ತು.

ನಾಚುತ್ತ ನೀನು ನಸುನಗೆಯ ನಕ್ಕಾಗ
ನಾ ಹೇಳಬಹುದಿತ್ತು,
ಇದು ನಗೆಯಲ್ಲ ಹಾಲ್ಗಡಲ ಪ್ರಶಾಂತ ಅಲೆಯೆಂದು.
ಆದರೇನು ಮಾಡಲಿ, ನಿನ್ನ ನಗೆಯ ಅಲೆಯಲ್ಲಿ
ನನ್ನೀ ಮನಸ್ಸು ಬಹುದೂರ ತೇಲಿಹೋಗಿತ್ತು.

ವೈಯಾರದಿ ನೀನು ಬಳುಕುತ್ತ ನಡೆವಾಗ
ನಾ ಹೇಳಬಹುದಿತ್ತು,
ನಿನ್ನ ನಡಿಗೆಯ ಸೊಬಗಿಗೆ ನವಿಲು ನಾಚುತ್ತೆಯೆಂದು.
ಆದರೇನು ಮಾಡಲಿ, ನಿನ್ನ ಹೆಜ್ಜೆಯ ತಾಳಕ್ಕೆ
ನನ್ನೀ ಹೃದಯದ ತಾಳ ತಪ್ಪಿತ್ತು.

ಹೃದಯದ ಹಂಬಲ, ಮನಸಿನ ತಳಮಳ,
ನಾ ಹೇಳಬಹುದಿತ್ತು,
ನೀ ನನಗೆ ಬಲು ಇಷ್ಟ ಎಂದು.
ಆದರೇನು ಮಾಡಲಿ, ನಾನೊಬ್ಬ ನಿಶ್ಕಲ್ಮಷ ಪ್ರೇಮಿಯಾದೆ,
ಕಣ್ಣು ಹೃದಯಗಳ ಮಾತಷ್ಟೇ ಸಾಕೆಂದು ನಂಬಿ, ಮೌನಿಯಾದೆ......


ಅಶ್ವತ್ ಭಾಗವತ್
ಹಿರಿಯಡಕ

Monday, March 22, 2010

ಒಲವಿನ ಉಡುಗೊರೆ

ಜೋಪಾನವೇ ಗೆಳತಿ ಜೋಪಾನ,
ಇದು ಬರಿಯ ಉಡುಗೊರೆಯಲ್ಲ ನನ್ನಿಡೀ ಹೃದಯ...
ಇದರಲ್ಲಿದೆ ಬರಿ ನಿನ್ನದೇ ಪ್ರತಿಬಿಂಬ,
ನಿನ್ನ ಹೆಸರಿನದೇ ಮಿಡಿತ,
ನಿನ್ನ ಒಲವಿನದೇ ತುಡಿತ.

ಬೇಕಿದಕೆ ಬೆಚ್ಚನೆಯ ಮಮಕಾರದ ಹಾಸು,
ಸಾಕಿದಕೆ ಪ್ರತಿದಿನವೂ ಮುತ್ತಿಟ್ಟು ನೇವರಿಸು.
ನಿನ್ನ ಪ್ರೀತಿಯ ಪಿಸುಮಾತಿನ ಜೋಗುಳವು ಚೆನ್ನ,
ನಿನ್ನೊಲವಿನ ನೆರಳಲ್ಲಿದು ಮಗುವಂತೆ ಚಿನ್ನ.

ಜೋಪಾನವೇ ಗೆಳತಿ ಜೋಪಾನ,
ಇದು ಬರಿಯ ಉಡುಗೊರೆಯಲ್ಲ ನನ್ನಿಡೀ ಹೃದಯ.......

ಅಶ್ವತ್ ಭಾಗವತ್
ಹಿರಿಯಡಕ

Friday, March 19, 2010

ಕಲ್ಪನೆಯ ಚೆಲುವೆ

ಕಮಲದಂತ ಕೋಮಲ ಕಂಗಳಲಿ

ತಂಪಾದ ಬೆಳದಿಂಗಳನು ತುಂಬಿ,

ಕೆನೆಯಂತ ಕೆನ್ನೆ ಮೇಲೆ

ಸಂಜೆ ರಂಗನ್ನು ತುಂಬಿ,

ಕೆಂಗುಲಾಬಿ ತುಟಿ ಮೇಲೆ

ಜೇನ ಹನಿಯಂತ ಕಿರು ನಗುವನ್ನು ತುಂಬಿ,

ಲತೆಯಂತೆ ಬಳುಕುತ್ತ ನೀ ನನ್ನೆದುರು ಸುಳಿದು,

ಉದುರಿದವು ಬಾವನೆಗಳು ತಂಗಾಳಿ ಹರಿದು

ಸುಮ್ಮನೆ ಅನಿಸಿತು ನನ್ನ ಕಲ್ಪನೆಯ ಚೆಲುವೆ,

ನೀನಾಗಬಾರದೇಕೆ ನನ್ನೆದೆಯಾಳದ ಕವಿಗೆ ಸ್ಪೂರ್ತಿಯ ಚಿಲುಮೆ !!

ಅಶ್ವತ್ ಭಾಗವತ್

ಹಿರಿಯಡಕ